ಅಪರೂಪ ಸಂಗ್ರಹದ ಅನಾವರಣ

ಕಲಾವಿದೆ ಸುರೇಖಾ ಅವರು ಎನ್‌.ಪುಷ್ಪಮಾಲಾ (ಬಲಗಡೆಯಿಂದ ಮೊದಲನೆಯವರು) ಅವರ ಸಂಗ್ರಹದ ಮೇಲೆ ಕಣ್ಣಾಡಿಸಿದ ಕ್ಷಣ

ಬೆಂಗಳೂರು: ಅಮ್ಮನ ಮುದ್ದೆ ಕೋಲು, ಮರದಡಿ ಎಸೆದು ಹೋದ ಬಣ್ಣ ಮಾಸಿದ ಮೂರ್ತಿ, ತಾತನ ಕಾಲದ ಅಪರೂಪದ ಕ್ಯಾಮೆರಾ, ರಸ್ತೆ ಬದಿ ಬಿದ್ದ ಹಕ್ಕಿಯ ಗೂಡು, ಸಂಡೆ ಸಂತೆಯಲ್ಲಿ ಕೊಂಡು ತಂದ ಕಪ್ಪು ಬಿಳುಪಿನ ಚಿತ್ರಪಟಗಳು..

ಹೀಗೆ ಹೇಳುತ್ತ ಹೋದರೆ ಅಲ್ಲಿ ಒಂದಲ್ಲ, ಎರಡಲ್ಲ ನೂರಾರು ವಿಚಿತ್ರವೆನಿಸುವ ಅಪರೂಪದ ಸಂಗ್ರಹಗಳು.

20 ಕಲಾವಿದರು ಕೂಡಿಕೊಂಡು ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ  ಮಂಗಳವಾರದಿಂದ ಆಯೋಜಿಸಿರುವ ‘ಸಾರ್ವಜನಿಕ ವಸ್ತುಸಂಗ್ರಹಾಲಯದಲ್ಲಿ ಖಾಸಗಿ ಸಂಗ್ರಹಗಳು’ ಎಂಬ ಶೀರ್ಷಿಕೆಯ  ಪ್ರದರ್ಶನದಲ್ಲಿ ಇವುಗಳನ್ನೆಲ್ಲ ನೋಡಬಹುದು.

ವಿವಿಧ ದೇಶಗಳ ಕಲಾವಿದ ಸ್ನೇಹಿತರು ಕೊಟ್ಟ ಕಾಣಿಕೆಗಳು, ಸಂಗೀತ ಉಪಕರಣಗಳು, ಬೆಕ್ಕಿನ ಮುಖದ ಮೂಳೆ, ಮನುಷ್ಯನ ಬೆನ್ನೆಲುಬಿನ ಮೂಲೆಯ ಸರ, ಅಳಗುಳಿ ಆಟ ಮಣೆ ಹೀಗೆ ತಮ್ಮಲ್ಲಿರುವ ತರಹೆವಾರಿ ಸಂಗ್ರಹವನ್ನು ಕಲಾವಿದೆ ಸುರೇಖಾ ಪ್ರದರ್ಶನದಲ್ಲಿ ಅನಾವರಣಗೊಳಿಸಿದ್ದಾರೆ.

‘ಇದು ನೋಡಿ ನನ್ನ ತಂದೆ 1940ರಲ್ಲಿ ತಹಶೀಲ್ದಾರ್‌ ಆಗಿದ್ದ ವೇಳೆ ಬಳಸುತ್ತಿದ್ದ ಕೋಲು, ಅದು ಅಮ್ಮನ ಮುದ್ದೆ ಮಾಡುವ ಕೋಲು. ಇವು ಬ್ರೆಜಿಲ್‌ನಿಂದ ತಂದ ಮರದ ಬೀಜಗಳು ಅವುಗಳೊಂದಿಗಿರುವುದು ಚಂದನದ ಬೊಂಬೆ’ ಎಂದು ಕಲಾವಿದೆ ಶೀಲಾಗೌಡ ತಮ್ಮ ಸಂಗ್ರಹವನ್ನು ಪರಿಚಯಿಸಿದರು.

ಕಲಾವಿದೆ ಆಯಿಷಾ ಅಬ್ರಾಹಂ ಅವರು ಕುಕ್‌ಟೌನ್‌ನಲ್ಲಿರುವ ತಮ್ಮ ಮನೆಯ ನೆರೆಹೊರೆಯಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಲು ಒಡೆದು ಹಾಕಿದ ಹಳೆಯ ಮನೆಗಳ ಅವಶೇಷದಡಿ ದೊರೆತ ಬಣ್ಣ ಮಾಸಿದ ಕಪ್ಪು ಬಿಳುಪಿನ ಪೋಟೊಗಳನ್ನು ಪ್ರದರ್ಶನದಲ್ಲಿ ಇಟ್ಟಿದ್ದಾರೆ.

ಬರೋಡಾದ ಶುಕ್ರವಾರದ ಮಾರುಕಟ್ಟೆಯಲ್ಲಿ ಮೆಚ್ಚಿ ಎತ್ತಿಕೊಂಡ ಬಂದ ಹಳೆಯ ಚಿತ್ರಪಟಗಳು, 1931 ರಷ್ಟು ಹಳೆಯದಾಗಿರುವ ಮೊದಲಿಯಾರ್‌ ಕುಟುಂಬಗಳ ಛಾಯಾಚಿತ್ರಗಳು ಗಮನ ಸೆಳೆಯುತ್ತವೆ.

ಕಲಾವಿದ ಗುರುದಾಸ್ ಶೆಣೈ ಅವರು ತಮ್ಮ ಪೂರ್ವಿಕರಿಂದ ತಲೆತಲಾಂತರದಿಂದ ಬಳುವಳಿಯಾಗಿ ಬಂದಿರುವ ಅಪರೂಪ ಎನಿಸುವ ಗೃಹಬಳಕೆ ವಸ್ತುಗಳನ್ನು ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ.

ಇಂದಿಗೂ ಸುಸ್ಥಿತಿಯಲ್ಲಿರುವ ತಾತನ ಕಾಲದ ಕ್ಯಾಮೆರಾ, ಹಸ್ತಪ್ರತಿ, ಪಾತ್ರೆ, ಅಳಗುಳಿ ಆಟದ ಮಣೆ, 150 ವರ್ಷಗಳಷ್ಟು ಹಳೆಯದಾದ ಮೈಸೂರು ಸಾಂಪ್ರದಾಯಿಕ ಕಲಾಕೃತಿ –ಹೀಗೆ ಅನೇಕ ಪುರಾತನ ವಸ್ತುಗಳು ಅವರ ಸಂಗ್ರಹದಲ್ಲಿವೆ.

ಜನರು ದಾರಿಯ ಬದಿ ಬಿಸುಟಿ ಹೋದ ಬೇಡದ ಬೊಂಬೆಗಳು, ಮೂರ್ತಿಗಳನ್ನು ಸುತ್ತಾಟದ ಸಮಯದಲ್ಲಿ ಎತ್ತಿಕೊಂಡು ಬಂದ ಕಲಾವಿದ ಸುರೇಶ್ ಜೈರಾಮ್‌ ಅವರು, ಅವುಗಳನ್ನು ತಮ್ಮ ಅಮೂಲ್ಯ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ನಿತ್ಯ ಬೆಳಿಗ್ಗೆ 11ರಿಂದ ಸಂಜೆ 7ರ ವರೆಗೆ ನಡೆಯುವ ಈ ಪ್ರದರ್ಶನ ಮೇ 5 ರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ   ಇರಲಿದೆ.