ಆರ್ಟ್ ಗ್ಯಾಲರಿ ಒಪ್ಪಂದ ರದ್ದುಪಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ March 20th
PDF ಆರ್ಟ್ ಗ್ಯಾಲರಿ ಒಪ್ಪಂದ ರದ್ದುಪಡಿಸಲು ಆಗ್ರಹ

ಬೆಂಗಳೂರು: ‘ವೆಂಕಟಪ್ಪ ಆರ್ಟ್‌ ಗ್ಯಾಲರಿಯನ್ನು  ದತ್ತು ನೀಡುವ ಸಂಬಂಧ ತಸ್ವೀರ್ ಫೌಂಡೇಷನ್‌ ಜತೆ ಪ್ರವಾಸೋದ್ಯಮ ಇಲಾಖೆಯು ಮಾಡಿಕೊಂಡಿರುವ ಒಪ್ಪಂದವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಕಲಾವಿದ ಚಿ.ಸು.ಕೃಷ್ಣಸೆಟ್ಟಿ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಅಭಿವೃದ್ಧಿಪಡಿಸಲು ಖಾಸಗಿ ಸಂಸ್ಥೆಗೆ ವಹಿಸಿರುವುದು ಸರಿಯಲ್ಲ. ಕಲಾವಿದರಿಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯೊಂದಿಗೆ ಭಾವನಾತ್ಮಕ ಸಂಬಂಧ ಇದೆ. ಅದನ್ನು ಹಾಳು ಮಾಡಬಾರದು’ ಎಂದು ಹೇಳಿದರು.

‘ವೆಂಕಟಪ್ಪ ಆರ್ಟ್ ಗ್ಯಾಲರಿಯು ನಗರದ ಹೃದಯಭಾಗದಲ್ಲಿರುವ ಕಬ್ಬನ್‌ ಉದ್ಯಾನದ ಆವರಣದಲ್ಲಿದೆ.  ಗ್ಯಾಲರಿಯನ್ನು ಖಾಸಗಿ ಕಂಪೆನಿಗೆ ದತ್ತು ನೀಡುತ್ತಿರುವುದರ ಹಿಂದೆ ಭೂ ಕಬಳಿಕೆ ಹುನ್ನಾರ ಇದೆ’ ಎಂದು ಆರೋಪಿಸಿದರು.

ಕಲಾವಿದ ಪ.ಸ.ಕುಮಾರ್ ಮಾತನಾಡಿ, ‘ನಗರದ ಅತ್ಯಂತ ಹಳೆಯ ಗ್ಯಾಲರಿಗಳಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ಪ್ರಮುಖವಾದುದು. ಅದನ್ನು ವ್ಯಾಪಾರಿ ದೃಷ್ಟಿಯಿಂದ ನೋಡಬಾರದು’ ಎಂದು ಹೇಳಿದರು.

‘ಕೇರಳ ಸರ್ಕಾರವು ಅಲ್ಲಿ 11 ಆರ್ಟ್ ಗ್ಯಾಲರಿಗಳನ್ನು ನಡೆಸುತ್ತಿದೆ. ಆದರೆ, ರಾಜ್ಯದಲ್ಲಿರುವ ಏಕೈಕ ಆರ್ಟ್ ಗ್ಯಾಲರಿಯನ್ನು ನಡೆಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದಾದರೆ ಏನು ಹೇಳಬೇಕು ?’ ಎಂದು ಪ್ರಶ್ನಿಸಿದರು.

‘ಗ್ಯಾಲರಿಯನ್ನು ಅಭಿವೃದ್ಧಿಪಡಿಸಲು ತಸ್ವೀರ್ ಫೌಂಡೇಷನ್‌ಗೆ ದತ್ತು ನೀಡಿರುವುದನ್ನು ಖಂಡಿಸಿ ಶನಿವಾರ (ಮಾರ್ಚ್ 19) ಗ್ಯಾಲರಿ ಎದುರು ಕಲಾವಿದರು ಕಲಾಕೃತಿಗಳನ್ನು ರಚಿಸುವ ಮೂಲಕ ವೆಂಕಟಪ್ಪ ಅವರಿಗೆ ಗೌರವಾರ್ಪಣೆ ಮಾಡಲಾಗುವುದು.

ಭಾನುವಾರ (ಮಾರ್ಚ್ 20) ಕಪ್ಪು ಬಣ್ಣದ ಕೊಡೆಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಗುವುದು. ಸಾಹಿತಿಗಳು, ಕಲಾವಿದರು, ನಾಟಕಕಾರರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ’ ಎಂದರು.