ಒಂದು ಗೋಡೆಯಲ್ಲ, ಒಂದು ಮಹಡಿಯಲ್ಲ, ಇಡೀ ಗ್ಯಾಲರಿಯನ್ನೇ ಕೇಳುವೆವು..

 

ಹಮ್ ಮೆಹನತ್ ಕಶ್ ಜಗವಾಲೋಂಸೆ,

ಜಬ್ ಅಪನಾ ಹಿಸ್ಸಾ ಮಾಂಗೆಗೆ,

ಏಕ್ ಖೇತ ನಹೀ,

ಏಕ್ ದೇಶ ನಹೀ

ಹಮ್ ಸಾರಿ ದುನಿಯಾ ಮಾಂಗೆಂಗೆ…

 

ನಾವು ಬೆವರನು ಸುರಿಸಿ ದುಡಿಯುವ ಜನ,

ನಮ್ಮ ಬೆವರಿನ ಪಾಲನು ಕೇಳುವೆವು,

ತುಂಡು ಭೂಮಿಯಲ್ಲ, 

ಒಂದು ದೇಶವಲ್ಲ, 

ಇಡೀ ಭೂಮಂಡಲವನೇ ಕೇಳುವೆವು… 

ಫೈಜ್ ಅಹ್ಮದ್ ಫೈಜ್ ನೆನಪಾಗಿ ಹೋದರು..

‘ವೆಂಕಟಪ್ಪ ಆರ್ಟ್ ಗ್ಯಾಲರಿ ನಮ್ಮದು’

ಒಂದು ವೆಂಕಟಪ್ಪ ಗ್ಯಾಲರಿ ಎಂದರೆ ಒಂದು ಕೆಫ಼್ತೆರಿಯಾ, ಒಂದು ಸುಂದರ ಕಲಾಕೃತಿ ನೇತು ಹಾಕುವ ಜಾಗವಷ್ಟೇ ಅಲ್ಲ.. ಅದು ಎಲ್ಲವೂ. ಎಲ್ಲ ಅಂದರೆ ಎಲ್ಲವೂ..

ವೆಂಕಟಪ್ಪ ಗ್ಯಾಲರಿ ಯಾಕೆ ಖಾಸಗಿಯವರಿಗೆ ಕೊಡಬಾರದು ಎನ್ನುವುದು ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ.

ಕಲಾವಿದರ ಪಾಲಿಗೆ ಇದು ಒಂದು ಸ್ಥಳವಲ್ಲ, ಆತ್ಮ.

ಇಲ್ಲಿನ ಮಾಳಿಗೆ, ಮಣ್ಣು, ಕೊಳ, ಹಸಿರು, ಬಿದಿರು ಮೆಳೆ, ಗೋಡೆ, ಕಲ್ಲು.. ಎಲ್ಲವನ್ನೂ ಇಷ್ಟು ದಿನ ಕಲಾವಿದರು ಉಸಿರಾಡಿದ್ದಾರೆ.

ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ನೇತು ಹಾಕಿ ಬಹುರಾಷ್ಟ್ರೀಯ ಕಂಪನಿಗಳಿಗೆ ದಾಟಿಸಿ ಕಲಾವಿದನಿಗೂ, ತಸ್ವೀರ್ ಗೂ ರೊಕ್ಕ ಎನಿಸಿಕೊಳ್ಳುವ ತಾಣ ಮಾತ್ರ ಅಲ್ಲ.

ಇಲ್ಲಿ ಆಲೋಚನೆಗಳು ಮೊಳೆತಿವೆ. ಪ್ರತಿಭಟನೆಯ ಹುಮ್ಮಸ್ಸು ಕಿಚ್ಚು ಹತ್ತಿಸಿಕೊಂಡಿದೆ. ವಿಮರ್ಶೆಯ ಕಣ್ಣು ಮೂಡಿದೆ. ಪ್ರೀತಿ ಅರಳಿದೆ. ಪಿಸು ಮಾತುಗಳು ಬೆಳೆದು ಘರ್ಜನೆಯಾಗಿದೆ. ಸಾಹಿತ್ಯಕ್ಕೂ ರಂಗಭೂಮಿಗೂ ಚಲನ ಚಿತ್ರಕ್ಕೂ ಕ್ಯಾನ್ವಾಸ್ ಆಗಿದೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿ ‘ಬ್ರಾಂಡೆಡ್’ ವ್ಯಕ್ತಿಗಳು ಓಡಾಡಿಲ್ಲ..  ಕನಸು ಹೊತ್ತ ಮನುಷ್ಯರು ನಡೆದಾಡಿದ್ದಾರೆ.

ಆ ಕಾರಣಕ್ಕಾಗಿ ವೆಂಕಟಪ್ಪ ಕಲಾ ಗ್ಯಾಲರಿ ನಮ್ಮದು

ಕಲಾ ಗ್ಯಾಲರಿ ‘ಅವಧಿ’ಯದ್ದೂ

ಕನಸುಗಳು ಹೊತ್ತ ಪ್ರತಿಯೊಬ್ಬರದೂ..

-ಜಿ ಎನ್  ಮೋಹನ್ 

 

ಇಲ್ಲಿನ ಎಲ್ಲಾ ಚಿತ್ರಗಳೂ ಸುರೇಖಾ ಶಾರದಾ ಅವರ ಫೇಸ್ ಬುಕ್ ಗೋಡೆಯಿಂದ