ಕಪ್ಪು ಕೊಡೆ ಹಿಡಿದು, ವಿಷಲ್‌ ಊದಿ ವಿಭಿನ್ನ ಪ್ರತಿಭಟನೆ

ಪ್ರಜಾವಾಣಿ ವಾರ್ತೆ | March 21, 2016

ಬೆಂಗಳೂರು: ವೆಂಕಟಪ್ಪ ಆರ್ಟ್‌ ಗ್ಯಾಲರಿಯ (ವಿಎಜಿ) ಖಾಸಗೀಕರಣ ವಿರೋಧಿಸಿ ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಸಂಘಟನೆಗಳ ಸದಸ್ಯರು ನಗರದ ಪುರಭವನದ ಎದುರು ಭಾನುವಾರ ಕಪ್ಪು ಕೊಡೆಗಳನ್ನು ಹಿಡಿದು, ವಿಷಲ್‌ ಊದುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಲೇಖಕಿ ಡಾ. ವಿಜಯಾ, ‘ಕಲೆ ಮತ್ತು ಸಂಸ್ಕೃತಿಯನ್ನು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದ್ಯಾವುದರ ಅರಿವಿಲ್ಲದ ರಾಜಕಾರಣಿಗಳು ವಿಎಜಿಯನ್ನು ಖಾಸಗಿಯವರಿಗೆ ವಹಿಸಿದ್ದಾರೆ. ಇದು ಅವರ ಅಜ್ಞಾನಕ್ಕೆ ಸಾಕ್ಷಿ’ ಎಂದು ಟೀಕಿಸಿದರು.

‘ಸರ್ಕಾರದ ನಿರ್ಧಾರ ಖಂಡಿಸಿ ಕಲಾವಿದರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಒಬ್ಬರೂ ಇತ್ತ ತಿರುಗಿ ನೋಡಿಲ್ಲ. ಇದು ಹೀಗೆ ಮುಂದುವರೆದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಾಹಿತಿ ಡಾ. ಕಮಲಾ ಹಂಪನಾ, ‘ವಿಎಜಿ ಕುರಿತು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿಯಲ್ಲ. ಇದು ಕಲಾವಿದರನ್ನು ಗ್ಯಾಲರಿಯಿಂದ ದೂರ ಇಡುವ ಹುನ್ನಾರವಾಗಿದೆ’ ಎಂದು  ಹೇಳಿದರು.

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಬಿ.ಆರ್‌. ಮಂಜುನಾಥ್, ‘ವಿಎಜಿ ಖಾಸಗೀಕರಣ ಸಂಬಂಧ, ಪ್ರವಾಸೋದ್ಯಮ ಇಲಾಖೆ ತಸ್ವೀರ್‌ ಫೌಂಡೇಷನ್‌ ಜತೆ ಮಾಡಿಕೊಂಡಿರುವ ಒಪ್ಪಂದವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.