ಕಬ್ಬನ್‌ ಉದ್ಯಾನದಲ್ಲಿ ‘ಸಾಂಸ್ಕೃತಿಕ ನಡಿಗೆ’

Prajavani |ಪ್ರಜಾವಾಣಿ ವಾರ್ತೆ | 18th April 2016

ಬೆಂಗಳೂರು: ನಗರದ ವೆಂಕಟಪ್ಪ ಆರ್ಟ್‌ ಗ್ಯಾಲರಿಯ ಸಂಸ್ಥಾಪನಾ ದಿನದ ಪ್ರಯುಕ್ತ   ಭಾನುವಾರ ಗ್ಯಾಲರಿಯ ಫೋರಂ ವತಿಯಿಂದ ಕಬ್ಬನ್‌ ಉದ್ಯಾನದಲ್ಲಿ ‘ಸಾಂಸ್ಕೃತಿಕ ನಡಿಗೆ’  ಆಯೋಜಿಸಲಾಗಿತ್ತು.

ವೆಂಕಟಪ್ಪ ಆರ್ಟ್‌ ಗ್ಯಾಲರಿ ಖಾಸಗೀಕರಣ ವಿರೋಧಿಸಿ  ನಡೆಯುತ್ತಿರುವ ಕಲಾ ಸಮೂಹದ ಪ್ರತಿಭಟನೆ ಭಾಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಉದ್ಯಾನಕ್ಕೆ ಬರುವ ವಾಯುವಿಹಾರಿಗಳಿಗೆ ಕಲಾವಿದರ ಮಾರ್ಗದರ್ಶನದಲ್ಲಿ ಉದ್ಯಾನದಲ್ಲಿ ಅಳವಡಿಸಿರುವ ಕಾಷ್ಠ ಕಲಾಕೃತಿಗಳ ದರ್ಶನ ಮಾಡಿಸುವ ವ್ಯವಸ್ಥೆ ಮಾಡಲಾಗಿತ್ತು.

ಕಲಾವಿದ ಎಸ್‌. ಶಿವಪ್ರಸಾದ್‌ ಅವರು ಸಾಂಸ್ಕೃತಿಕ ನಡಿಗೆಯಲ್ಲಿ ಭಾಗವಹಿಸಿದವರಿಗೆ ಕಾಷ್ಠ ಕಲಾಕೃತಿಗಳ ಪರಿಚಯಿಸುವ ಜತೆಗೆ ಕಲೆಯ ಮಹತ್ವ ಕುರಿತು ಮಾಹಿತಿ ನೀಡಿದರು. ಕಲಾವಿದ ಜಾನ್‌ ದೇವರಾಜ್‌ ಅವರ  ತಂಡ ವಿಶಿಷ್ಟ ಸಂಗೀತದ ಸುಧೆಯಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿತು.

‘ನಾವು ಸದ್ಯ ಸರ್ಕಾರದ ತೀರ್ಮಾನ ಎದುರು ನೋಡುತ್ತಿದ್ದೇವೆ. ಅದು ಹೊರಬೀಳುವ ವರೆಗೆ ಪ್ರತಿ ಭಾನುವಾರ ನಾವು ಪ್ರತಿಭಟನೆಯನ್ನೇ ಒಂದು ರಚನಾತ್ಮಕ ಮಾದರಿಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಫೋರಂ ಸದಸ್ಯ ಸುರೇಶ್ ಕುಮಾರ್‌ ತಿಳಿಸಿದರು. ಕಾರ್ಯಕ್ರಮದ ಭಾಗವಾಗಿ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ ಕಲಾವಿದ ಅಭಿಷೇಕ್ ಹಜ್ರಾ ಅವರ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿತ್ತು.