ಬಂಡವಾಳದ ಭ್ರಮೆ: ದಿವಾಳಿಯಾಗಿರುವ ಕರ್ನಾಟಕ ಸರ್ಕಾರ ಮತ್ತು ಇತರ ಕಟ್ಟು ಕಥೆಗಳು

ಬಂಡವಾಳದ ಭ್ರಮೆ: ದಿವಾಳಿಯಾಗಿರುವ ಕರ್ನಾಟಕ ಸರ್ಕಾರ ಮತ್ತು ಇತರ ಕಟ್ಟು ಕಥೆಗಳು
ರಶ್ಮಿ ಮುನಿಕೆಂಪಣ್ಣ ಮತ್ತು ಶ್ರೀಧರ್ ಗೌಡ
ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ಖಾಸಗಿಯವರಿಗೆ ‘ದತ್ತು’ ಕೊಡುವ ವಿವಾದದಲ್ಲಿ ಬಹುಮುಖ್ಯವಾಗಿ ಪ್ರಸ್ತಾಪವಾಗುತ್ತಿರುವ ವಿಚಾರಗಳು ಎರಡು. ಮೊದಲನೆಯದ್ದು ಇಂಥ ಸಂಸ್ಥೆಗಳನ್ನು ನಡೆಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಬಂಡವಾಳದ ಕೊರತೆ ಕಾಡುತ್ತಿರುವುದು. ಎರಡನೆಯದ್ದು ಖಾಸಗಿ ವಲಯದಿಂದ ಬರುವ ಹಣದಿಂದ ಇದನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ ಎಂಬುದು. ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆಯ ವಾರ್ಷಿಕ ವರದಿ ಮತ್ತು ಸಂಬದಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಬೇರೆಯೇ ಚಿತ್ರಣ ಕಾಣಿಸುತ್ತದೆ.ಈ ಚಿತ್ರಣ ಪ್ರತಿಭಟಿಸುತ್ತಿರುವವರ ಮೇಲೆ ಹೇರಿರುವ ಬಂಡವಾಳ ಹುಡುಕುವ ಪ್ರಶ್ನೆಗಳನ್ನು ಉತ್ತರಿಸುತ್ತಾ ಸರ್ಕಾರ ಮತ್ತು ಖಾಸಗಿ ವಲಯಗಳ ಸಹಭಾಗಿತ್ವ(ಪಿಪಿಪಿ)ದ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ.
2014-15 ರಲ್ಲಿ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪುರಾತತ್ವ ಇಲಾಖೆಗೆ 65 ಕೋಟಿ ಬಜೆಟ್ ನಿಗದಿ ಮಾಡಲಾಗಿತ್ತು. ಇದರಲ್ಲಿ ಇಲಾಖೆ ವೆಚ್ಚ ಮಾಡಿದ್ದು ಕೇವಲ 43.8 ಕೋಟಿ ರೂಪಾಯಿಗಳನ್ನು ಮಾತ್ರ. ಇಲಾಖೆಯು ಒಟ್ಟಾರೆ ಆಯವ್ಯಯದಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ಅಭಿವುದ್ದಿಗೆ ಕೇವಲ 2014-15 ರಲ್ಲಿ 40.63 ಲಕ್ಷವನ್ನು 2013-14 ರಲ್ಲಿ ಸರ್ಕಾರಿ ಸಂಗ್ರಹಾಲಯ ಸೇರಿಸಿ 1.97 ಲಕ್ಷವನ್ನು ವೆಚ್ಚ ಮಾಡಲಾಗಿತ್ತು. ಈ ವೆಚ್ಚವು ಸಂಗ್ರಹಾಲಯಗಳ ಅಭಿವೃದ್ದಿ ಕಾರ್ಯಯೋಜನೆಯಾಗಿದ್ದು ‘ಸಂಗ್ರಹಾಲಯದ ನಿರ್ವಹಣೆ ಮತ್ತು ಅಭಿವೃದ್ಧಿ ಯನ್ನು ಕ್ರಮಬದ್ದವಾಗಿ ಮಾಡಲಾಗಿದೆ’ ಎಂದು 2014-15 ವರದಿ ಹೇಳುತ್ತದೆ.
ತನ್ನ ಬಳಿ ಸಾಕಷ್ಟು ಹಣವಿದ್ದರೂ ಖರ್ಚು ಮಾಡದ ಇಲಾಖೆಯೊಂದರ ಅಡಿಯಲ್ಲಿ ಇರುವ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ‘ಉದ್ಧಾರ’ ಮಾಡುವುದಕ್ಕೆ ತಸ್ವೀರ್ ಫೌಂಡೇಶನ್ ಎಂಬ ಖಾಸಗಿ ಸಂಸ್ಥೆ ನೀಡಿದ ಪ್ರಸ್ತಾವನೆ ಸರ್ಕಾರಕ್ಕೆ ಆಕರ್ಷಣೀಯವಾಗಿ ಕಂಡಿದ್ದೇ ವಿಚಿತ್ರ. ಏಕೆಂದರೆ ವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆಯ ಬಳಿಯೇ ಸರ್ಕಾರ ಒದಗಿಸಿದ ಅನುದಾನದಲ್ಲಿ 21 ಕೋಟಿ ರೂಪಾಯಿಗಳು ಬಳಕೆಯಾಗದೆ ಉಳಿದಿದೆ. 2014–2015ರ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿಯೂ ಹೀಗೆಯೇ 15 ಕೋಟಿ ರೂಪಾಯಿಗಳಷ್ಟು ದೊಡ್ಡ ಮೊತ್ತ ಖರ್ಚಾಗದೇ ಉಳಿದಿದೆ. ಮಾರ್ಚ್ 2015 ಕ್ಕೆ ಕೊನೆಯಾದ ವರ್ಷದ ಪ್ರವಾಸಿ ಇಲಾಖೆಯ ಮೇಲಿನ ಕಟುವಾದ ಕಾಗ್(CAG) ವರದಿ, ಕರ್ನಾಟಕ ಟೂರಿಸಮ್ ವಿಷನ್ ಗ್ರೂಪ್ (KTVG) ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಖಾಸಗಿ ಠೇವಣಿ ಇಲಾಖೆಯಲ್ಲಿ ಕಾದಿರಿಸಿದ್ದ 15 ಕೋಟಿ ಹಣವನ್ನು, ಯಾವುದೇ ಚಟುವಟಿಕೆ ಅಥವಾ ಕಾರ್ಯಕ್ರಮಗಳನ್ನು ಗುರುತಿಸದೆ ಜೂನ್ 2015 ರ ತನಕ ಉಪಯೋಗಿಯಸದ ಕಾರಣಕ್ಕೆ ಟೀಕೆ ಮಾಡಿತ್ತು. ತಮಾಷೆ ಎಂದರೆ ತಸ್ವೀರ್ ಫೌಂಡೇಶನ್‘ದತ್ತು’ ಪಡೆಯುವುದಕ್ಕಾಗಿ ನೀಡಿರುವ ಪ್ರಸ್ತಾವನೆಯಲ್ಲಿ 10 ಕೋಟಿ ಸಂಗ್ರಹಿಸುವ ಆಶಯ ಇದೆಯೇ ಹೊರತು ಭರವಸೆಯಿಲ್ಲ. ಗ್ಯಾಲರಿಯನ್ನು ದತ್ತು ನೀಡುವುದಕ್ಕೆ ಹಣದ ಕೊರತೆ ಕಾರಣ ಎಂಬುದು ಸುಳ್ಳು ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟ ಪಡಿಸುತ್ತಿವೆ. ಬಂಡವಾಳದ ಕೊರತೆ ಎನ್ನುವ ಹೇಳಿಕೆ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವಲ್ಲವೇ?
ಬಂಡವಾಳದ ಕೊರತೆ ಇಲ್ಲದಿದ್ದರೂ ಮೇ 2015 ರಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ತಸ್‌ವೀರ್ ಫೌಂಡೇಶನ್ ಗೆ ‘ದತ್ತು’ ನೀಡಲು ಸರ್ಕಾರ ಆದೇಶ ಹೊರಡಿಸುತ್ತದೆ.
ವೆಂಕಟಪ್ಪ ಆರ್ಟ್ ಗ್ಯಾಲರಿಯನ್ನು ದುರಸ್ತಿ ಮಾಡಿ ಸುಸ್ಥಿತಿಯಲ್ಲಿ ಇಡಲು 5 ವರ್ಷಕ್ಕೆ ದತ್ತು ನೀಡುವ ಆದೇಶ ಎಂದು ಈ ವರದಿ ತಿಳಿಸಿದರೆ ಒಡಂಬಡಿಕೆ ಯಲ್ಲಿ 5+ 5 ವರ್ಷ ಮತ್ತು ಸಂಪೂರ್ಣ ನಿಯಂತ್ರಣಕ್ಕೆ ಹೇಗೆ ಬದಲಾಯ್ತು?
ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ (ಪಿಪಿಪಿ) ಹೆಸರಿನಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆಯು 2014-15 ರಲ್ಲಿ 80 ಲಕ್ಷ, 2013-14 ರಲ್ಲಿ 90 ಲಕ್ಷ ಮತ್ತು 2012-13 ರಲ್ಲಿ 80 ಲಕ್ಷ ವನ್ನು ಪಡೆದಿದೆ. ಈ ಪಿಪಿಪಿ ಗಳು ಖಾಸಗಿ ಸಂಸ್ಥೆಗಳಿಗೆ ಹಣವನ್ನು ಕೊಡಲು ಮಾಡುವ ಒಡಂಬಡಿಕೆಗಳೇ? ಯಾವ ಕಾರಣಕ್ಕೆ ಪ್ರಾಚ್ಯವಸ್ತು, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ತನ್ನ ಸಂಗ್ರಹಾಲಯದ ಅಭಿವೃದ್ಧಿಗೆ ನೀಡುವ ಹಣಕ್ಕಿಂತ ಹೆಚ್ಚಿಗೆ ಹಣವನ್ನು ಖಾಸಗಿ ಸಂಸ್ಥೆಗಳಿಗೆ ನೀಡುತ್ತಿದೆ?
ಕರ್ನಾಟಕ ಪ್ರವಾಸೋದ್ಯಮ ವಿಷನ್ ಗ್ರೂಪ್ (ಕೆಟಿವಿಜಿ-2014) ಶಿಫಾರಸುಗಳಲ್ಲಿ ಮತ್ತು ಪ್ರವಾಸಿ ನೀತಿ 2014-15 ರಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೊಳ್ಳಲಾಗುವ ಯೋಜನೆಗಳಲ್ಲಿ ಶೇಕಡಾ 50ರಷ್ಟುವೆಚ್ಚವನ್ನು ಸರ್ಕಾರವು ಭರಿಸಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ . ಆದರೆ ಪಿಪಿಪಿಯ ಇಬ್ಬರೂ ಪಾಲುದಾರರು ಈ ವಿಚಾರವನ್ನು ಮುಚ್ಚಿಡುತ್ತಿದ್ದಾರೆ. ಅಂದರೆ ಸರ್ಕಾರ ತಾನು ಹೂಡುವ ಮೊತ್ತದ ಬಗ್ಗೆ ಹೇಳದೆಯೇ ಖಾಸಗಿಯವರಿಂದ ದಾನ ಪಡೆಯುತ್ತಿದ್ದೇನೆ ಎನ್ನುತ್ತಿದೆ. ಖಾಸಗಿಯವರು ತಾವು ದಾನ ಕೊಡುತ್ತಿದ್ದೀವೆ ಎಂಬ ಹುಸಿ ಉದಾರತೆ ತೋರುತ್ತಿದ್ದಾರೆ. ಹಾನ್ಸ್ ಹಾಕ್ , ಪಿಯರ್ ಬೋರ್ಡಿಯು ಗೆ ‘ಫ್ರೀ ಎಕ್ಸ್‌ಚೇಂಜ್’ ನಲ್ಲಿ ಹೇಳಿದ ಹಾಗೆ ‘ಸತ್ಯಸಂಗತಿ ಏನೆಂದರೆ ತೆರಿಗೆದಾರರು, ಖಾಸಗಿ ಸಂಸ್ಥೆಗಳು ತೆರಿಗೆ ಕಡಿತದಿಂದ ಉಳಿಸಿದ ‘ಉದಾರ ಕೊಡುಗೆ’ ಯನ್ನು ಭರಿಸುತ್ತಾರೆ. ಕಡೆಯಲ್ಲಿ ಖಾಸಗಿ ಪ್ರಚಾರಕ್ಕೆ ನಾವೇ ಸಹಾಯಧನ ಕೊಡುವವರು. ಆಮಿಷದ ವೆಚ್ಚಗಳು ಪದಾರ್ಥಗಳನ್ನು ಮಾರುವದಕ್ಕೆ ಸಹಾಯ ಮಾಡುತ್ತದೆ….ಪ್ರಾಯೋಜಕರ ಆಸಕ್ತಿಗಳಿಗೆ ರಾಜಕೀಯ ಅನುಕೂಲಕರ ವಾತಾವರಣ ಸೃಷ್ಟಿಸುವುದು ಬಹಳ ಮುಖ್ಯ, ವಿಶೇಷವಾಗಿ ತೆರಿಗೆ, ಕಾರ್ಮಿಕ ಮತ್ತು ಆರೋಗ್ಯದ ಕಾನೂನುಗಳು, ಪರಿಸರ ನಿರ್ಬಂದಗಳು , ರಫ್ತು ನಿಯಮಗಳು..’
ವಸ್ತು ಸಂಗ್ರಹಾಲಯಗಳು ಮತ್ತು ಆರ್ಟ್ ಗ್ಯಾಲರಿಗಳನ್ನು ನಡೆಸಲಾಗದೆ ಖಾಸಗಿಯವರಿಗೆ ದತ್ತು ಕೊಡಲು ಹೊರಟಿರುವ ಪ್ರವಾಸೋದ್ಯಮ ಇಲಾಖೆ ಇತ್ತೀಚೆಗೆ ಮಾಡಿದ ಖರ್ಚುಗಳನ್ನು ನೋಡಿದರೆ ‘ಹಣಕಾಸು ಕೊರತೆ’ಯ ಮತ್ತೊಂದು ಮುಖ ಅನಾವರಣಗೊಳ್ಳುತ್ತದೆ. 2015ರ ಆಗಸ್ಟ್ 6ರಂದು ಬೆಂಗಳೂರಿನ ಇಂಟರ್ ನ್ಯಾಷನಲ್ ಎಗ್ಸಿಬಿಷನ್ ಸೆಂಟರ್‌ನಲ್ಲಿ ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ (ಪಿಎಟಿಎ)ಎಂಬ ಸಂಸ್ಥೆ ನಡೆಸಿದ ‘ಟ್ರಾವೆಲ್ ಮಾರ್ಟ್’ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ವಹಿಸಲು ಪ್ರವಾಸೋದ್ಯಮ ಇಲಾಖೆ ವ್ಯಯಿಸಿದ್ದು ಐಯ್ದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತ. ಪಂಚತಾರಾ ಹೊಟೇಲುಗಳಲ್ಲಿ ಪಿಎಟಿಎ ನಿರ್ದೇಶಕ ಸಭೆ ಮತ್ತು ವಸತಿ ವ್ಯವಸ್ಥೆಗೆ 22.13 ಲಕ್ಷ ರೂಪಾಯಿಗಳಷ್ಟು ಖರ್ಚಾಗಿದೆ. ಜಾಹೀರಾತಿಗೆ ವ್ಯಯಿಸಿದ ಹಣ 11.63 ಲಕ್ಷ. ಇವುಗಳನ್ನೆಲ್ಲಾ ಮಂಜೂರು ಮಾಡುವುದಕ್ಕೆ ಪಾರದರ್ಶಕತಾ ಕಾಯ್ದೆಯಿಂದಲೂ ಇಲಾಖೆ ವಿನಾಯಿತಿ ಪಡೆದುಕೊಂಡಿದೆ! ಈ ಕಾಯ್ದೆಯು ಜಾರಿಗೆ ಬಂದ ದಾಖಲೆಯಲ್ಲಿ ”ಇತ್ತೀಚಿನ ದಿನಗಳಲ್ಲಿ ಸರ್ಕಾರದ ಇಲಾಖೆಗಳಲ್ಲಿ, ಸರ್ಕಾರಿ ಕೈಗಾರಿಕೆಗಳಲ್ಲಿ, ಕಾನೂನುಬದ್ದ ಮಂಡಳಿಗಳಲ್ಲಿ ಟೆಂಡರ್ ಕಾರ್ಯವಿಧಾನಗಳಲ್ಲಿ ಅವ್ಯವಹಾರ ನಡೆದಿದೆ. ಟೆಂಡರ್ ಗಳ ಅಸಮರ್ಪಕ ಪ್ರಚಾರ , ದಾಖಲೆಗಳ ಸೀಮಿತ ಸರಬರಾಜು, ಮೌಲ್ಯ ಮಾಪನ ಮತ್ತು ಸಮ್ಮತಿ ಕೊಡುವಲ್ಲಿ ಪಾರದರ್ಶಕತೆಯ ಕೊರತೆ” ಎಂದು ಹೇಳಲಾಗಿದೆ.
ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದಕ್ಕಾಗಿ ಮೊರೆ ಹೋಗುವ ಸರ್ಕಾರ ಪಿಎಟಿಎ ಕಾರ್ಯಕ್ರಮಕ್ಕೆ ಐದು ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಕಣ್ಣು ಮುಚ್ಚಿಕೊಂಡು ಮಂಜೂರು ಮಾಡುತ್ತದೆ. ಇದೇ ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀಡುವ ಅನುದಾನ ಒಂದು ಕೋಟಿ ರೂಪಾಯಿಗಳನ್ನು ಮೀರುವುದಿಲ್ಲ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಸಾಂಸ್ಕೃತಿಕ ಕೇಂದ್ರಗಳನ್ನು ಖಾಸಗೀಕರಿಸುವ ಪರಿಕಲ್ಪನೆ ಹುಟ್ಟಿಕೊಂಡದ್ದು ಕೆಟಿವಿಜಿ ನೀಡಿರುವ ಶಿಫಾರಸುಗಳಿಂದ. ಇಂಗ್ಲಿಷ್‌ನಲ್ಲಿ ಮಾತ್ರವಿರುವ ಈ ವರದಿ ಮತ್ತು ಪ್ರವಾಸಿ ನೀತಿಯ ಉದ್ದಕ್ಕೂ ಕರ್ನಾಟಕದ ಪರಂಪರೆಯ ಅಂಗವಾಗಿರುವ ಅನೇಕ ಸಂಸ್ಥೆಗಳು ಮತ್ತು ವ್ಯಕ್ತಿಗಳ ಪ್ರಸ್ತಾಪವೇ ಇಲ್ಲ. ಈ ವರದಿಯಲ್ಲಿ ವಚನ ಸಾಹಿತ್ಯ ಪರಂಪರೆ, ಕುವೆಂಪು, ತೇಜಸ್ವಿ, ನೀನಾಸಂ, ರಂಗಾಯಣದ ಬಹುರೂಪಿ ಹಬ್ಬದ ವಿಚಾರ ಬಂದೇ ಇಲ್ಲ. ಕೆಟಿವಿಜಿ ಗುಂಪಿನ ಸದಸ್ಯರಲ್ಲಿ ಬೆಂಗಳೂರಿನ ಖಾಸಗಿ ಉದ್ಯಮ ವಲಯದವರೇ ಹೆಚ್ಚಿದ್ದರಿಂದ ಹಾಗು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಧಿಸುವವರು ಇಲ್ಲದ್ದರಿಂದ ಅದು ಮಾಡಿದ ಶಿಫಾರಸುಗಳಲ್ಲಿ ಖಾಸಗೀಕರಣಕ್ಕೆ ಒತ್ತು ಕೊಡಲಾಗಿದೆ. ಕೆಟಿವಿಜಿಯ ಶಿಫಾರಸುಗಳನ್ನು ಜಾರಿಗೆ ತರುವ ಕೆಲಸ ಮಾಡುವುದಕ್ಕೆ ಬೇಕಿರುವ ವಿವರಣಾತ್ಮಕ ಯೋಜನಾ ವರದಿಯನ್ನು ರೂಪಿಸುವುದಕ್ಕೆ ಕರೆದಿದ್ದ ಟೆಂಡರ್‌ನಲ್ಲಿಯೂ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಮಾತ್ರ ಸಲ್ಲಿಸಬೇಕು ಎಂಬ ಷರತ್ತಿತ್ತು. ಕನ್ನಡವನ್ನು ಆಡಳಿತ ಭಾಷೆ ಎಂದು ಒಪ್ಪಿಕೊಂಡಿರುವ ರಾಜ್ಯದಲ್ಲೇ ಇದು ಹೇಗೆ ಸಂಭವಿಸಿತೆಂಬ ಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ.ಅಲ್ಲದೆ ಪ್ರವಾಸಿ ಇಲಾಖೆಗೆ ಖಾಸಗಿ ಸಂಸ್ಥೆಗಳ ಪಾರದರ್ಶಕತೆ ಇಲ್ಲದ ಪ್ರೋತ್ಸಾಹವೇ ಆದ್ಯತೆಯಾಗಿದೆ.
ಜಗತ್ತಿನಾದ್ಯಂತ ಮುಕ್ತ ಮಾಹಿತಿಗಾಗಿ ಆಂದೋಲನ ನಡೆಯುತ್ತಿರುವ ಕಾಲವಿದು. ಸರ್ಕಾರದ ಪ್ರತಿಯೊಂದು ನಡೆಯನ್ನೂ ಸಾರ್ವಜನಿಕರು ಅರಿಯಲಿ ಎಂಬ ಕಾರಣಕ್ಕಾಗಿಯೇ ಮಾಹಿತಿ ಹಕ್ಕು ಕಾಯ್ದೆಯನ್ನು ಭಾರತದಲ್ಲಿಯೂ ಜಾರಿಗೆ ಬಂದಿದೆ . ಆದರೆ ಕರ್ನಾಟಕದ ಪ್ರವಾಸೋದ್ಯಮ ಇಲಾಖೆ. ಕೆಟಿವಿಜಿ ನಡವಳಿಕೆ ಮತ್ತು ವೆಂಕಟಪ್ಪ ಆರ್ಟ್ ಗ್ಯಾಲರಿಯ ಒಡಂಬಡಿಕೆಯ ಪ್ರತಿಯನ್ನು ಈ ಕಾಯ್ದೆಯನ್ವಯ ಒದಗಿಸಬೇಕು ಎಂದರೆ ‘ಈ ಮಾಹಿತಿಗಳು ಖಾಸಗಿ ಸಂಸ್ಥೆಗಳ ಹಾಗೂ ಇಲಾಖೆ ನಡುವಿನ ವಿಶ್ವಾಸ ಮತ್ತು ನಂಬಿಕೆಯ ಪ್ರಶ್ನೆಯಾಗಿರುವುದರಿಂದ ಹಾಗೂ ಅವುಗಳ ಉದ್ಯೋಗ ಮತ್ತು ವ್ಯವಹಾರಗಳಿಗೆ ಸಂಬಂದಿಸಿದ್ದು, ಇವುಗಳ ನೀಡುವಿಕೆಯಿಂದ ಅವರ ವ್ಯಾಪಾರ ವ್ಯವಹಾರ ಸ್ಪರ್ಧಾತ್ಮಕತೆಗೆ ಅಡಚಣೆ ಉಂಟಾಗುವ ಹಾಗು ದೇಶದ ಸ್ವಾತಂತ್ರ್ಯಕ್ಕೆ ಮತ್ತು ಭದ್ರತೆಗೆ ದಕ್ಕೆಯಾಗುವುದಿದ್ದರೆ ಕಾರಣ ತಮ್ಮ ಮನವಿಯನ್ನು ಪುರಸ್ಕರಿಸಲು ಬರುವುದಿಲ್ಲ’ ಎಂಬ ಉತ್ತರ ಬಂದಿದೆ.ಇದರ ಅರ್ಥವೇನು? ಸಾರ್ವಜನಿಕ ಸ್ವಾಮ್ಯದ ಗ್ಯಾಲರಿಯೊಂದನ್ನು ದತ್ತು ಪಡೆಯುವ ಸಂಸ್ಥೆಯ ಕುರಿತಂತೆ ಸಾರ್ವಜನಿಕರು ಏನನ್ನೂ ತಿಳಿದುಕೊಳ್ಳಬಾರದು ಎಂದೇ?
ತಸ್‌ವೀರ್ ಫೌಂಡೇಶನ್ ಮತ್ತು ವಿಷನ್ ಗ್ರೂಪ್ ಸರ್ಕಾರ ರಕ್ಷಿಸಬೇಕಾದಂತ ಖಾಸಗಿ ಸಂಸ್ಥೆಗಳೇ?
ಮಂತ್ರಿ ದೇಶಪಾಂಡೆ ಯವರು ಹಿಂದೆ ಕೂಡ ಲೋಕಾಯುಕ್ತ ವಿರುದ್ದ ತಮ್ಮ ಆಸ್ತಿ ವಿಚಾರವನ್ನು ಬಹಿರಂಗ ಮಾಡಬಾರದೆಂದು ವಿವಾದಕ್ಕೆ ಇಳಿದಿದ್ದರು.
ಕಳೆದ ಕೆಲವು ವಾರಗಳಿಂದ ನಾವು ಹೇಗೆ ಸರ್ಕಾರ ಪ್ರಜಾತಂತ್ರದ ಮುಳುವಿಗೆ ಕಾರಣವಾಗುವಂತವ ವಿಧಾನಗಳನ್ನು ಅನುಸರಿಸುತ್ತ ಪಾರದರ್ಶಕತೆ ಇಲ್ಲದ ಪರಿಸ್ಥಿತಿ ಇರುವುದು ಬೆಳೆಕಿಗೆ ಬಂದಿದೆ. ಸಣ್ಣ ಖಾಸಗಿ ಗುಂಪು ಸರ್ಕಾರದ ಜೊತೆ ಸೇರಿ ನಮ್ಮೆಲ್ಲ ಬೀದಿ, ಆರೋಗ್ಯ, ಕೆರೆ, ಉದ್ಯಾನವನ ನಿರ್ವಹಣೆಯನ್ನು ತಮ್ಮ ಪಾಲಿಗೆ ತೆಗೆದುಕೊಳ್ಳುವ ಹುನ್ನಾರ ನಡೆಸಿ ಈಗ ಸಂಸ್ಕೃತಿ ಮತ್ತು ಪರಂಪರೆಯ ಜಾಗಕ್ಕೆ ಲಗ್ಗೆ ಹಾಕಿದ್ದಾರೆ. ಆದರೆ ರಂಗನಿರ್ದೇಶಕ ಬಸವಲಿಂಗಯ್ಯನವರು ಹೇಳಿದಂತೆ ”ಭಾರತದ ಅಥವಾ ಕರ್ನಾಟಕದ ಯಾವುದೇ ಸಾಂಸ್ಕೃತಿಕ ಸಂಸ್ಥೆಗಳು ಯಾವುದೇ ವ್ಯಕ್ತಿಗೆ ಅಥವಾ ಖಾಸಗಿ ಸಂಸ್ಥೆಗೆ ಮಾರಾಟಕ್ಕೆ ಇಲ್ಲ. ಪ್ರಜಾಪ್ರಭುತ್ವ ಇನ್ನೂ ಈ ನಾಡಲ್ಲಿ ಸಕ್ರಿಯವಾಗಿದೆ”.
ಕರ್ನಾಟಕದ ಜನತೆ ಬಂಡವಾಳದ ಭ್ರಮೆ ತಮ್ಮ ಕಲ್ಪನೆಯನ್ನು ಕಟ್ಟಿಕ್ಕಲು ಬಿಟ್ಟಿಲ್ಲ. ನಾಗರಿಕರಿಗೆ ಪ್ರಜಾತಂತ್ರದ ಕಾರ್ಯವಿಧಾನಗಳನ್ನು ಬಲಪಡಿಸಲು ಒಗ್ಗಟ್ಟು ಮತ್ತು ಪ್ರತಿಭಟನೆ ಮಾತ್ರ ಉಳಿದಿರುವ ದಾರಿ.
prajavani

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s